
ಬೆಂಗಳೂರಿನಲ್ಲಿ ಯುವತಿಯೊಬ್ಬರ ತಾಯಿ ನಗ್ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಸಿ ಯುವತಿ ಚಿತ್ರಗಳನ್ನು ಪಡೆದಿದ್ದ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ.
ಬೆಂಗಳೂರು: ಮಹಿಳೆಯೊಬ್ಬರ ಅಶ್ಲೀಲ ಫೋಟೊ ಸೃಷ್ಟಿಸಿ ಅವರ ಮಗಳಿಗೆ ಕಳುಹಿಸಿ, ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನೊಬ್ಬನ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 18 ವರ್ಷದ ಯುವತಿ ಈ ಯುವಕನ ವಿರುದ್ಧ ದೂರು ನೀಡಿದ್ದಾರೆ. ಅಪರಿಚಿತ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ 2023ರ ಸೆಪ್ಟೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿರುತ್ತದೆ. ಈತ ಯುವತಿಯ ತಾಯಿಯ ಫೋಟೊವನ್ನು ಅಶ್ಲೀಲವಾಗಿ ಸೃಷ್ಟಿಸಿ ಕಳುಹಿಸಿದ್ದ. ಇದರಿಂದ ಬೆದರಿದ ಯುವತಿ ಫೋಟೊವನ್ನು ತೆಗೆದು ಹಾಕುವಂತೆ ಮನವಿ ಮಾಡಿ ಕೊಂಡಿದ್ದಾರೆ. ಆದರೆ ಅಪರಿಚಿತ ಈ ಮನವಿಗೆ ಒಪ್ಪಿರಲಿಲ್ಲ.ಈ ಯುವಕ ಮತ್ತೆ ಯುವತಿಗೆ ಸಂದೇಶ ಕಳುಹಿಸಿ ನಿನ್ನ ನಗ್ನ ಫೋಟೊಗಳನ್ನು ಕಳುಹಿಸು ಎಂಬ ಬೇಡಿಕೆ ಇರಿಸುತ್ತಾನೆ. ಒಂದುವೇಳೆ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಮತ್ತೆ ಬೆದರಿಸುತ್ತಿರುತ್ತಾನೆ.ಅಮ್ಮನ ಗೌರವ ಉಳಿಸಲು ಈ ಯುವತಿ ತನ್ನ ನಗ್ನ ಫೋಟೊಗಳನ್ನು ಕಳುಹಿಸಿದ್ದು, ಆ ಯುವಕ ಈ ಫೋಟೊಗಳನ್ನು ತನ್ನ ಮಿತ್ರರಿಗೆ ಕಳುಹಿಸಿದ್ದ. ಇಷ್ಟಕ್ಕೇ ಸುಮ್ಮನಾಗದೇ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಈತನ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿ ನಂತರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅಪರಿಚಿತನನ್ನು ಪತ್ತೆ ಮಾಡಲು ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.