March 14, 2025

ಶಾಲಿನಿ ರಜನೀಶ್ ಜೊತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಸಭೆ.!?

Spread the love


ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರ ಸಭೆ ನಡೆಯಿತು. ಈ ಸಭೆಯು ಸರ್ಕಾರಿ ನೌಕರರ ಸಮಸ್ಯೆಗಳು ಮತ್ತು ಅವರ ಬೇಡಿಕೆಗಳ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆಯಾಗಿತ್ತು.



ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಿದರು. ಮುಖ್ಯವಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು. ಅಲ್ಲದೆ, ಎಲ್ಲಾ ಇಲಾಖೆಗಳ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ತಿದ್ದುಪಡಿ ತರಬೇಕು ಎಂಬ ಅಗತ್ಯವನ್ನು ವೀಕ್ಷಣೆಗೆ ತಂದರು.

ಹಾಗೆಯೇ, ಪ್ರತಿವರ್ಷ ಜನವರಿ ಅಥವಾ ಡಿಸೆಂಬರ್‌ನಲ್ಲಿ ಜೇಷ್ಠತಾ ಪಟ್ಟಿ ಪ್ರಕಟಿಸಬೇಕೆಂದು ವಿನಂತಿಸಿದರು. ನಿಗದಿತ ಅವಧಿಯಲ್ಲಿ ವೇತನ ಭತ್ಯೆಗಳನ್ನು ಪಾವತಿಸುವುದು, ಅಧಿಕಾರಿಗಳು ಮತ್ತು ನೌಕರರ ವಿಚಾರಣೆಯನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿದರು.

ಸರ್ಕಾರಿ ನೌಕರರ ಮೇಲೆ ದೈಹಿಕ ಹಲ್ಲೆ ಅಥವಾ ದೌರ್ಜನ್ಯವನ್ನು ತಡೆಯಲು ಕಠಿಣ ಕಾನೂನುಗಳು ರೂಪಿಸುವ ಅಗತ್ಯವಿದೆ ಎಂದು ಶಡಕ್ಷರಿ ಒತ್ತಿಹೇಳಿದರು. ಪ್ರತಿ ವರ್ಷ ಏಪ್ರಿಲ್ 21ರಂದು ಸರ್ಕಾರಿ ನೌಕರರ ದಿನಾಚರಣೆ ನಡೆಸಬೇಕು ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಕ್ರಮ ಜಾರಿಗೆ ತರಬೇಕೆಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆಯಾಯಿತು. ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವುದು ಮತ್ತು ರಾಜ್ಯದ ಜನಸಂಖ್ಯೆ ಅನುಗುಣವಾಗಿ ಹೊಸ ಹುದ್ದೆಗಳನ್ನು ಸೃಜಿಸುವಂತೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಹಾಗೆಯೇ, ಮಹಿಳಾ ಸಿಬ್ಬಂದಿಗೆ ಎಲ್ಲಾ ಕಚೇರಿಗಳಲ್ಲಿ ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸುವ ಬಗ್ಗೆ ಗಮನ ಹರಿಸಲಾಯಿತು. ಈ ಸಭೆಯು ಸರ್ಕಾರಿ ನೌಕರರ ಹಿತಾಸಕ್ತಿಗೆ ಸ್ಪಷ್ಟ ದಾರಿದೀಪವಾಗಿದೆ.