
ಕುಂದಾಪುರ :
ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೊಡಿ ಮುಸ್ಲಿಂಕೇರಿ ಅಂಗನವಾಡಿ ಕೇಂದ್ರ ಇದೀಗ ವಿವಾದಕ್ಕೆ ಗುರಿಯಾಗಿದೆ. ಕೇಂದ್ರದ ಕಾರ್ಯಕರ್ತೆಯಾದ ಶ್ರೀಮತಿ ನಾಗರತ್ನ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ.

ಅಂಗನವಾಡಿ ಕಾರ್ಯಕರ್ತೆಯ ಪಾತ್ರ ಅತ್ಯಂತ ಮಹತ್ವದದಾಗಿದೆ. ಅವರು ಪ್ರತಿದಿನ ಮಕ್ಕಳ ಬೆಳವಣಿಗೆ ಬಗ್ಗೆ ಮಾಹಿತಿ ನೀಡುವುದು, ಗರ್ಭಿಣಿ ಮಹಿಳೆಯರ ನೋಂದಣಿ ಮಾಡುವುದು, ರಿಜಿಸ್ಟರ್ ಪುಸ್ತಕದಲ್ಲಿ ದಾಖಲೆ ನವೀಕರಿಸುವುದು, ಜನನ ಮತ್ತು ಮರಣ ದಾಖಲೆ ಮಾಡುವುದು ಸೇರಿದಂತೆ ಹಲವು ಹೊಣೆಗಾರಿಕೆಗಳನ್ನು ನಿರ್ವಹಿಸುವುದು ಅವರ ಜವಾಬ್ದಾರಿಯಾಗಿದೆ.
ಆದರೆ, ಕೊಡಿ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರತ್ನ ಅವರು ತಮ್ಮ ಕರ್ತವ್ಯಗಳಲ್ಲಿ ಗಂಭೀರ ನಿರ್ಲಕ್ಷ್ಯ ತೋರುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಅವರು ಕೆಲಸದ ಸಮಯದಲ್ಲಿ ಮಕ್ಕಳು ಊಟ ಮಾಡಿ ಮಲಗುತ್ತಿದ್ದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಬದಿಗೊತ್ತಿ, ಆರಾಮವಾಗಿ ಮಲಗಿ ಮೊಬೈಲ್ ನೋಡುತ್ತಿದ್ದ ದೃಶ್ಯಗಳು ಲಭ್ಯವಾಗಿವೆ.

ಈ ಅವ್ಯವಸ್ಥೆಯಿಂದಾಗಿ ಕೆಲವು ಮಕ್ಕಳು ನಿದ್ದೆಯ ನಡುವೆಯೇ ಎದ್ದು ಹೊರ ಹೋಗುವಂತಹ ದುರ್ಘಟನೆಗಳೂ ನಡೆದಿದೆ ಎನ್ನಲಾಗಿದೆ. ಮಕ್ಕಳ ಭದ್ರತೆ ಮತ್ತು ಕಲ್ಯಾಣಕ್ಕಾಗಿ ನಡೆಸಲ್ಪಡುವ ಈ ರೀತಿಯ ಸಂಸ್ಥೆಗಳಲ್ಲಿ ಈ ರೀತಿಯ ನಿರ್ಲಕ್ಷ್ಯವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿದ್ದಾರೆ. ತಕ್ಷಣವೇ ತಾಲೂಕು ಸಿಡಿಪಿಒ (ಚೈಲ್ಡ್ ಡೆವಲಪ್ಮೆಂಟ್ ಪ್ರೊಜೆಕ್ಟ್ ಆಫೀಸರ್) ಅವರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಜವಾಬ್ದಾರಿ ನಿರ್ಲಕ್ಷಿಸಿದ ಕಾರ್ಯಕರ್ತೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಕ್ಕಳ ಹಿತಾಸಕ್ತಿಗೆ ವಿರೋಧವಾಗುವ ಯಾವುದೇ ಕೃತ್ಯಕ್ಕೆ ಶಿಸ್ತಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಮುನ್ನಡೆಸಬೇಕಿದೆ.