
ಶಿವಮೊಗ್ಗ :
ಹೊಸನಗರ ತಾಲ್ಲೂಕಿನಲ್ಲಿ ಶ್ರೀಗಂಧ ಕಳ್ಳತನ ಮಾಡುವವರ ವಿರುದ್ಧ ಅರಣ್ಯ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಫೆಬ್ರವರಿ 16 ರಂದು ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.
ಬಂಧಿತರನ್ನು ದಿನೇಶ್ (31) ಮತ್ತು ರಾಘವೇಂದ್ರ (32) ಎಂದು ಗುರುತಿಸಲಾಗಿದೆ. ಇವರಿಂದ 18 ಕೆಜಿ ಶ್ರೀಗಂಧದ ಕಡ್ಡಿಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಈ ದಾಳಿಯಲ್ಲಿ ಹೊಸನಗರ ಅರಣ್ಯಾಧಿಕಾರಿಗಳಾದ ಅನಿಲ್ ಕುಮಾರ್ ಎಸ್., ಮಂಜುನಾಥ ಕೆ. ಎನ್., ಪುಟ್ಟಸ್ವಾಮಿ ಕೆ. ವಿ., ಭರತ್ ಕುಮಾರ್, ಸುರೇಶ್ ಐ., ರಾಜು ಎನ್., ಪ್ರಶಾಂತ, ಮಹೇಶ್ ಹಾಗೂ ವಾಹನ ಚಾಲಕರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಶ್ರೀಗಂಧ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಪರವಾನಗಿ ಇಲ್ಲದೆ ಮರ ಕಡಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಸಂಪತ್ತುಗಳ ಸಂರಕ್ಷಣೆ ಮತ್ತು ಕಳ್ಳತನ ತಡೆಗಟ್ಟಲು ಸಾರ್ವಜನಿಕ ಸಹಕಾರ ಅಗತ್ಯವಿದೆ. ಶ್ರೀಗಂಧ ಕಳ್ಳತನದ ಕುರಿತು ಯಾವುದೇ ಮಾಹಿತಿ ಇದ್ದರೆ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.