March 14, 2025

ಆಶಾ ಕಾರ್ಯಕರ್ತೆ ಗಂಗಮ್ಮ ಅವರ ಮಾನವೀಯತೆ: ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ!?

Spread the love


ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಶಾ ಕಾರ್ಯಕರ್ತೆ ಗಂಗಮ್ಮ ಅವರು ಸಮಾಜಮುಖಿ ದಾನ ಮೂಲಕ ಮಾದರಿಯಾಗಿದ್ದಾರೆ. ಶಾಲೆಗೆ ಭೇಟಿ ನೀಡಿದಾಗ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಕೊರತೆಯಿರುವುದನ್ನು ಕಂಡು, ತಮ್ಮ ಗೃಹಲಕ್ಷ್ಮೀ ಯೋಜನೆಯ 12 ತಿಂಗಳ ಹಣವನ್ನು ಕೂಡಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಈ ಮಾದರಿಯ ಸೇವಾ ಮನೋಭಾವ ಇತರರಿಗೂ ಪ್ರೇರಣೆ ನೀಡುತ್ತದೆ…

ಆದರೆ, ಇಲ್ಲಿ ಒಂದು ಗಂಭೀರ ಪ್ರಶ್ನೆ ಉದ್ಭವಿಸುತ್ತದೆ!


ಸರ್ಕಾರಿ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವ ಹೊಣೆ ಸರ್ಕಾರ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳದ್ದಾಗಿದೆಯಾದರೂ, ಏಕೆ ಆ ಜವಾಬ್ದಾರಿ ನಿರ್ಲಕ್ಷ್ಯಗೊಳ್ಳುತ್ತಿದೆ? ಶಾಲೆಯ ಮಕ್ಕಳು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವುದು ಸಂಬಂಧಿತ ಅಧಿಕಾರಿಗಳ ವಿಫಲತೆಯನ್ನು ತೋರಿಸುತ್ತದೆ. ಆಶಾ ಕಾರ್ಯಕರ್ತೆ ತಮ್ಮ ವೈಯಕ್ತಿಕ ಹಣವನ್ನು ಬಳಸಿ ಸಮಸ್ಯೆ ಪರಿಹರಿಸಬೇಕಾದ ಪರಿಸ್ಥಿತಿ, ಆಡಳಿತ ವ್ಯವಸ್ಥೆಯ ದುರ್ಬಲತೆಯನ್ನು ಬಯಲು ಮಾಡುತ್ತದೆ.

ಸಾರ್ವಜನಿಕರ ಆಕ್ರೋಶ ಮತ್ತು ಆಡಳಿತದ ಜವಾಬ್ದಾರಿ
ಈ ಘಟನೆ ಗ್ರಾಮ ಪಂಚಾಯತಿ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ಸಾರ್ವಜನಿಕರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರಿಗಳು ಜನತೆಗೆ ಜವಾಬ್ದಾರಿಯುತ ಸೇವೆ ನೀಡಬೇಕಾದರೆ, ಅವರು ಭ್ರಷ್ಟಾಚಾರ ಹಾಗೂ ನಿರ್ಲಕ್ಷ್ಯ ತೊರೆದು ಜನೋಪಯೋಗಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು.

ಹಾವೇರಿ ಜಿಲ್ಲೆಯ ಈ ಘಟನೆಯು ರಾಜ್ಯದ ಇತರ ಸರ್ಕಾರಿ ಶಾಲೆಗಳಲ್ಲಿಯೂ ಮೂಲಭೂತ ಸೌಕರ್ಯ ಮತ್ತು ಕುಡಿಯುವ ನೀರಿನ ಸ್ಥಿತಿಗತಿ ಹೇಗಿದೆ ಎಂಬುದರ ಪರಿಶೀಲನೆಗಾಗಿ ಸಂಬಂಧಿತ ಇಲಾಖೆಗಳ ಗಮನಕ್ಕೆ ತರುವುದು ಅಗತ್ಯ. ಕೇವಲ ಸಾರ್ವಜನಿಕ  ವ್ಯಕ್ತಿಗತ ದಾನಗಳಿಂದಲ್ಲ, ಬದಲಾಗಿ ಸರ್ಕಾರವೇ ಸಕಾಲಿಕ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನಸಾಮಾನ್ಯರ ನಿರೀಕ್ಷೆ.

ಈ ಪ್ರಕರಣವು ಕೇವಲ ಒಂದು ಗ್ರಾಮಕ್ಕಷ್ಟೇ ಸೀಮಿತವಲ್ಲ, ಇಡೀ ರಾಜ್ಯದ ಶಿಕ್ಷಣ ವ್ಯವಸ್ಥೆಯ ವೈಫಲ್ಯವನ್ನು ತೋರುತ್ತಿದೆ. ಆದ್ದರಿಂದ, ಈ ವಿಷಯ ಸರ್ಕಾರದ ಗಮನಕ್ಕೆ ಹೋಗಿ, ತ್ವರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಬೇರೆ ಶಾಲೆಗಳಲ್ಲಿಯೂ ಇಂತಹ ಸಮಸ್ಯೆಗಳಿವೆ ಎಂಬುದನ್ನು ಅರಿತು, ಸರ್ಕಾರ ಶುದ್ಧ ಕುಡಿಯುವ ನೀರಿನ ಯೋಜನೆಗಳನ್ನು ಪ್ರತ್ಯೇಕ ಬಜೆಟ್ ಮೂಲಕ ಅನುಷ್ಠಾನಗೊಳಿಸಬೇಕಿರುವುದು ಅನಿವಾರ್ಯವಾಗಿದೆ

ಸಮಾಜಮುಖಿ ಕಾರ್ಯಗಳಿಗೆ ಸಹಾಯ ಮಾಡುವಂತಹ ವ್ಯಕ್ತಿಗಳ ಹೃದಯಸ್ಪರ್ಶಿ ಸೇವೆಯನ್ನು ನಾವು ಗೌರವಿಸಬೇಕು. ಆದರೆ, ಮೂಲಭೂತ ಸೌಕರ್ಯಗಳ ಒದಗಿಸುವ ಹೊಣೆ ಸರ್ಕಾರದದ್ದಾಗಿದ್ದು, ಪ್ರಜೆಗಳ ತೆರಿಗೆ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿ, ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವುದು ಆಡಳಿತಗಾರರ ಆದ್ಯತೆ ಆಗಬೇಕಾಗಿದೆ.