
ಕುಣಿಗಲ್ :
ಪೆಬ್ರವರಿ 9: ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸೋಮೆದೇವರ ಪಾಳ್ಯ ಗ್ರಾಮದಲ್ಲಿ ಹಳೆಯ ದ್ವೇಷ ಹಾಗೂ ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ಘಟನೆಯು ಭೀಕರತೆಯನ್ನು ತಲುಪಿದೆ.
ದೊಡ್ಡಪ್ಪನ ಮಗ ಮಂಜುನಾಥ್ ಎಂಬಾತ, ಚಿಕ್ಕಲಿಂಗೆಗೌಡ (48) ಎಂಬ ವ್ಯಕ್ತಿಗೆ ತೋಟದಲ್ಲಿ ಸುಮಾರು 11.30 am ಸಮಯದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ, ಅವರ ಕೈ ಕತ್ತರಿಸಿರುವುದಾಗಿ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಚಿಕ್ಕಲಿಂಗೆಗೌಡರನ್ನು ತಕ್ಷಣ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಮಾಹಿತಿ ಪಡೆದ ಕುಣಿಗಲ್ ಪೊಲೀಸ್ ಠಾಣೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ದಾಖಲು ಮಾಡಿಕೊಂಡು, ಆರೋಪಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಗ್ರಾಮದಲ್ಲಿ ಈ ಘಟನೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಘಟನೆಯ ನಿಖರ ತನಿಖೆ ನಡೆಸಿ ಆರೋಪಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.
