
ಮಂಡ್ಯ :
ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಭೂ ವಿವಾದದ ಸಂಬಂಧ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರ ಪತಿ ಶೇಖರ್ ಹಾಗೂ ಉಪಾಧ್ಯಕ್ಷ ಮನೋಹರ ಅರಸ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗ್ರಾಮದ ಗುರುಪ್ರಸಾದ್ ಎಂಬುವವರ ಜಮೀನು ಸರ್ಕಾರಿ ಶಾಲೆಗೆ ಹೊಂದಿಕೊಂಡಿತ್ತು. ಈ ಸಂಬಂಧ ಶಿಕ್ಷಣ ಇಲಾಖೆ ತಕರಾರು ಎತ್ತಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹದ್ದುಬಸ್ತು ನಿಗದಿಪಡಿಸಿದ್ದರು. ಆದರೆ, ಈ ಜಮೀನಿನ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ ಶೇಖರ್ ಮತ್ತು ಮನೋಹರ ಅರಸ್ ₹12 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಚರ್ಚೆಗಳ ಬಳಿಕ ₹8 ಲಕ್ಷ ನೀಡಲು ಗುರುಪ್ರಸಾದ್ ಒಪ್ಪಿಕೊಂಡಿದ್ದರು.
ಇದನ್ನರಿತು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಲಂಚದ ಮೊತ್ತವನ್ನು ಸ್ವೀಕರಿಸುವ ಸಂದರ್ಭ ಶೇಖರ್ ಮತ್ತು ಮನೋಹರ ಅರಸ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ಮತ್ತು ಅವರ ತಂಡ ಭಾಗವಹಿಸಿದ್ದರು. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.