
ಚಿಕ್ಕಮಗಳೂರು :
ಜಿಲ್ಲೆಯಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರು ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತದಿಂದ ನೀಡಲಾದ ಪರಿಹಾರ ಚೆಕ್‌ಗಳು ಬೌನ್ಸ್ ಆಗಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದ ಜನರು ನಿರಾಶರಾಗಿದ್ದಾರೆ.
ಕಳಸ ತಾಲೂಕಿನ ಹಳುವಳ್ಳಿ ನಿವಾಸಿಯಾಗಿರುವ ಲಕ್ಷ್ಮಣ್ ಮನೆ ಮೇಲೆ ಕಳೆದ ಮಳೆಗಾಲದಲ್ಲಿ ಮರ ಬಿದ್ದ ಪರಿಣಾಮ ಸಂಪೂರ್ಣ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರಿಗಾಗಿ 1,20,000 ರೂಪಾಯಿ ಪರಿಹಾರ ಮಂಜೂರು ಮಾಡಿತು. ಆದರೆ, ನೀಡಲಾದ ಚೆಕ್ ಬ್ಯಾಂಕ್‌ನಲ್ಲಿ ಬೌನ್ಸ್ ಆಗಿದ್ದು, ಲಕ್ಷ್ಮಣ್ ಕಳೆದ ಮೂರು ತಿಂಗಳಿನಿಂದ ಕಳಸ ತಾಲೂಕು ಕಚೇರಿಗೆ ಅಲೆದರೂ ಪರಿಹಾರದ ಹಣ ಇನ್ನೂ ಅವರ ಖಾತೆಗೆ ಜಮೆಯಾಗಿಲ್ಲ.
ಈ ಘಟನೆ ಸಂಬಂಧ ಸಂತ್ರಸ್ತರು ಜಿಲ್ಲಾಡಳಿತದ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆ ಹಾನಿ ಪರಿಹಾರ ಚೆಕ್ ಬೌನ್ಸ್ ಆಗಿರುವುದರಿಂದ ಇನ್ನಷ್ಟು ಸಂತ್ರಸ್ತರಿಗೆ ತೊಂದರೆ ಉಂಟಾಗುವ ಆತಂಕ ವ್ಯಕ್ತವಾಗುತ್ತಿದೆ.