
ಉಡುಪಿ ಜಿಲ್ಲೆ
ಅಫಜಲಪೂರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ಬಳಕೆಯಿಂದ ಹಾಳಾಗುತ್ತಿರುವ ಬಗ್ಗೆ ಚಿಂತನೆ ವ್ಯಕ್ತಪಡಿಸಿ, ಮಹಾಂತೇಶ್ವರ ಮಠದ ಪರಮ ಪೂಜ್ಯ ಶ್ರೀ ವೀರ ಮಹಾಂತ ಶಿವಾಚಾರ್ಯರು ಮಕ್ಕಳನ್ನು ಈ ವ್ಯಸನದಿಂದ ದೂರವಿಡಲು ಪೋಷಕರಿಗೆ ಕಿವಿಮಾತು ನೀಡಿದರು. ಚೌಡಾಪೂರ ಗ್ರಾಮದ ಶ್ರೀ ದೇವದತ್ತ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ), ಅಳ್ಳಗಿ (ಬಿ) ಸಂಸ್ಥೆಯ ಯಶಸ್ವಿನಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀಗಳು ತಮ್ಮ ಭಾಷಣದಲ್ಲಿ “ತಾಯಿಯೇ ಮೊದಲು ಗುರು” ಎಂಬುದರ ಮಹತ್ವವನ್ನು ವಿವರಿಸಿದರು. ತಾಯಂದಿರು ಮಕ್ಕಳ ಭವಿಷ್ಯ ರೂಪಿಸುವ ಪ್ರಮುಖ ಪಾತ್ರವಹಿಸುತ್ತಾರೆ ಮತ್ತು ನೈತಿಕ ಮೌಲ್ಯಗಳು ಹಾಗೂ ಶಿಕ್ಷಣ ಪರಸ್ಪರ ಸಂಬಂಧ ಹೊಂದಿದ್ದು, ಮಕ್ಕಳಲ್ಲಿ ಪ್ರತಿಭೆ ಗುರುತಿಸುವುದು ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು. ಸ್ವರ್ಗ ತಂದೆ-ತಾಯಿಯ ಪಾದದಲ್ಲಿ ಇದೆ ಎಂಬ ಮಾತಿನೊಂದಿಗೆ, ಸಂಸ್ಕಾರ ಹಾಗೂ ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಅಳ್ಳಗಿ (ಬಿ) ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸಿ, ವಿದ್ಯಾರ್ಥಿಗಳು ದೃಢ ಸಂಕಲ್ಪ, ಅಧ್ಯಯನಶೀಲತೆ, ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉತ್ತಮ ಭವಿಷ್ಯದ ಸೃಷ್ಟಿಸಿಕೊಳ್ಳುವ ಹಾದಿಯಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಂಸ್ಥೆಯ ಕಾರ್ಯವನ್ನು ಅವರು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಗುರುಪಾದಪ್ಪ ಕುಮಸಗಿ, ಬಣಜಿಗ ಸಮಾಜದ ಅಧ್ಯಕ್ಷ ಬಸಣ್ಣ ಗುಣಾರಿ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಮುಖ್ಯಗುರುಗಳು, ಶಿಕ್ಷಕ ವೃಂದ, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಈ ಶೈಕ್ಷಣಿಕ ಸಂಸ್ಥೆ, ಕೇವಲ ಪಾಠಶಾಲೆ ಆದಲ್ಲ, ಜೀವನವನ್ನು ರೂಪಿಸುವ ಮಹತ್ವದ ಪಾಠ ನೀಡುವ ಪೀಠವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ವರದಿ : ಆರತಿ ಗಿಳಿಯಾರ್