
ಕುಂದಾಪುರ: ಕುಂದಾಪುರ ತಾಲ್ಲೂಕಿನ ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ಕರ್ನಾಟಕ ಸರ್ಕಾರದಿಂದ ಘೋಷಿಸಲ್ಪಟ್ಟ ಅತ್ಯುತ್ತಮ ಪ್ರಾದೇಶಿಕ ಭಾಷೆಯ ಚಲನಚಿತ್ರ **”ಟ್ರಿಪಲ್ ತಲಾಕ್”**ಗೆ ಕಥಾ ಕೊಡುಗೆ ನೀಡಿ, ನ್ಯಾಯಾಧೀಶರ ಪಾತ್ರದಲ್ಲಿ ಮಿಂಚಿ, ರಾಜ್ಯ ಪ್ರಶಸ್ತಿಯ ಗರಿಯನ್ನು ಮುಡಿಗಿರಿಸಿಕೊಂಡಿದ್ದಾರೆ.
ನ್ಯಾಯವಾದಿ ವೃತ್ತಿಯ ಜೊತೆಗೆ ಕಲಾರಂಗದಲ್ಲಿ ತೊಡಗಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ ಅವರು, ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಲು ಯಶಸ್ವಿಯಾಗಿದ್ದಾರೆ. “ಟ್ರಿಪಲ್ ತಲಾಕ್” ಚಲನಚಿತ್ರವು ಸಾಮಾಜಿಕ ವಿಷಯವನ್ನು ಆಳವಾಗಿ ಪ್ರತಿಬಿಂಬಿಸುತ್ತಿದ್ದು, ಅದರಲ್ಲಿ ನ್ಯಾಯಾಧೀಶರ ಪಾತ್ರವನ್ನು ನಿರ್ವಹಿಸಿದ ರವಿಕಿರಣ್ ಮುರುಡೇಶ್ವರ ಅವರ ಅಭಿನಯ ಪ್ರೇಕ್ಷಕರ ಮನಸೆಳೆಯಲು ಕಾರಣವಾಗಿದೆ.

ಅವರು ವೃತ್ತಿಯಲ್ಲಿ ಹಿರಿಯ ನ್ಯಾಯವಾದಿಯಾಗಿ ಹಲವು ಜನರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ವಿಶಿಷ್ಟ ಸಾಧನೆಯನ್ನು ಗೌರವಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಅವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಹಲವಾರು ನಾಗರಿಕರು, ನ್ಯಾಯಾಂಗ ಕ್ಷೇತ್ರದ ಸಹೋದ್ಯೋಗಿಗಳು ಹಾಗೂ ಸಮಾಜ ಸೇವಕರು ಇವರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.
ಇವರ ಈ ಸಾಧನೆ ಕುಂದಾಪುರ ಹಾಗೂ ಉಡುಪಿ ಜಿಲ್ಲೆಯ ಜನತೆಗೂ ಹೆಮ್ಮೆ ತರುವಂತಾಗಿದೆ. ಜನಸಾಮಾನ್ಯರ ಪರ ನಿಲ್ಲುವ ವಕೀಲರಾಗಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜ ಪರಿವರ್ತನೆಗೆ ಶ್ರಮಿಸುವ ಮೂಲಕ, ತಮ್ಮ ಸೇವಾ ಮನೋಭಾವವನ್ನು ಪ್ರದರ್ಶಿಸಿರುವ ಅವರು, ಕಲೆ ಮತ್ತು ನ್ಯಾಯ ಕ್ಷೇತ್ರ ಎರಡರಲ್ಲಿಯೂ ಸಮಾನ ಆಸಕ್ತಿಯನ್ನು ತೋರಿ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ.
ರಾಜ್ಯ ಪ್ರಶಸ್ತಿಗೆ ಭಾಜನರಾದ ಇವರು, ಮುಂದಿನ ದಿನಗಳಲ್ಲೂ ಸಮಾಜದ ಅಭಿವೃದ್ಧಿಗೆ, ನ್ಯಾಯಾಂಗ ಕ್ಷೇತ್ರದ ಪ್ರಗತಿಗೆ ಹಾಗೂ ಕಲಾ ಲೋಕದ ಬೆಳವಣಿಗೆಗೆ ತಮ್ಮ ಅನನ್ಯ ಕೊಡುಗೆ ನೀಡುವಂತಾಗಲಿ ಎಂಬದು ಎಲ್ಲರ ಆಶಯ.
– ವರದಿ: ಆರತಿ ಗಿಳಿಯಾರು, ಉಡುಪಿ ಜಿಲ್ಲೆ