
ಉಡುಪಿ: ದಲಿತ ಯುವಕ ಭಾಸ್ಕರ್ ಮೇಲಿನ ಹಲ್ಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯ PSI ಅವರು ಯಾವುದೇ ತಪ್ಪು ಮಾಡದೇ ಇರುವ ವ್ಯಕ್ತಿಯನ್ನು ಹೊಡೆದು, ನಂತರ ಕ್ಷಮೆಯಾಚನೆ ಮಾಡಿದ್ದು ಮತ್ತು 40 ಗಂಟೆಗಳ ಬಳಿಕ BNNS ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಪ್ರಶ್ನಾರ್ಹವಾಗಿದೆ ಎಂದು ನಾಗೇಂದ್ರ ಪುತ್ರನ್ ಕಿಡಿಕಾರಿದ್ದಾರೆ.
“ಸರ್ಕಾರಿ ಸಂಬಳ ಪಡೆದು ಸಾರ್ವಜನಿಕರ ಸೇವೆ ಮಾಡುವ ಪೊಲೀಸರಿಂದ ಈ ರೀತಿಯ ವರ್ತನೆ ನಿರೀಕ್ಷಿಸಲು ಸಾಧ್ಯವಿಲ್ಲ. ಜನರ ಗೌರವಕ್ಕೆ ಪಾತ್ರರಾಗಬೇಕಾದವರು, ಬಾಯಿಗೆ ಬಂದಂತೆ ಬೈದು, ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು ಪೊಲೀಸರಿಗೆ ಶೋಭೆ ತರುವ ವಿಷಯವಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆ ಪೊಲೀಸರ ವಿರುದ್ಧದ ಸಾರ್ವಜನಿಕ ವಿಶ್ವಾಸ ಕುಸಿಯುವಂತೆ ಮಾಡಿದ್ದು, ಉಡುಪಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಪುನರಾವೃತ್ತಿಯಾಗಬಾರದು ಎಂಬ ದೃಷ್ಟಿಯಿಂದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. “ಅಪರಾಧಿಗಳಿಗೆ ಶಿಕ್ಷೆ ನೀಡಲು ನ್ಯಾಯಾಂಗವಿದೆ, ಕಾರ್ಯನಿರ್ವಹಿಸುವ ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ,” ಎಂದು ನಾಗೇಂದ್ರ ಪುತ್ರನ್ ಒತ್ತಿಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಾಗೇಂದ್ರ ಪುತ್ರನ್ ಸೇರಿದಂತೆ ಹಲವಾರು ಸಾರ್ವಜನಿಕರು PSI ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವರದಿ : ಆರತಿ ಗಿಳಿಯಾರ್
Mobile :8951345631