
ಉಡುಪಿ ಜಿಲ್ಲೆಯಲ್ಲಿ ಭಾಸ್ಕರ್ ಎಂಬ ದಲಿತ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡ ಯತೀಶ್ ಕರ್ಕೇರ ಅವರು ಭಾಸ್ಕರ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಘಟನೆಯ ದಿನಮಾನ್ಯ ರಾಜ್ಯಪಾಲರು ಹಾಗೂ ಗೃಹ ಸಚಿವರು ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಹಲ್ಲೆಗೆ ಒಳಗಾದ ಭಾಸ್ಕರ್ ಗಿಳಿಯಾರ್ ಅವರ ತಂಗಿ ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೆ ತರಲು ಮನವಿ ನೀಡಲು ಹೊರಟಿದ್ದರು. ಆದರೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ ಅವರು ಅವರ ಮನವಿಯನ್ನು ನೀಡಲು ಅವಕಾಶ ನೀಡದೆ ತಡೆದು ನಿಲ್ಲಿಸಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ ಹಾಗೂ ಇತರ ಕಾಂಗ್ರೆಸ್ ನಾಯಕರು ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಸಾರ್ವಜನಿಕರು ಪೊಲೀಸರ ದೌರ್ಜನ್ಯಕ್ಕೆ ತುತ್ತಾದಾಗ, ಅವರು ತಮ್ಮ ಸಮಸ್ಯೆಯನ್ನು ಮನವಿ ರೂಪದಲ್ಲಿ ಸರ್ಕಾರದ ಗಮನಕ್ಕೆ ತರಲು ಅವಕಾಶ ದೊರಕಬೇಕು. ಅವರನ್ನು ತಡೆಯುವುದು ಅನ್ಯಾಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ” ಎಂದು ಅವರು ಆರೋಪಿಸಿದರು. ಅವರ ಹಸ್ತಕ್ಷೇಪದ ನಂತರ ಭಾಸ್ಕರ್ ಅವರ ತಂಗಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.
ಈ ಬೆಳವಣಿಗೆಯನ್ನು ತಿಳಿದ ಸಾರ್ವಜನಿಕರು, ಪ್ರಖ್ಯಾತ್ ಶೆಟ್ಟಿ ಹಾಗೂ ಇತರ ಕಾಂಗ್ರೆಸ್ ನಾಯಕರ ಧೈರ್ಯ ಮತ್ತು ಸಾರ್ವಜನಿಕ ಹಿತಚಿಂತನೆಯ ನಿಲುವಿಗೆ ಅಭಿನಂದನೆ ಸಲ್ಲಿಸಿದರು. ಈ ಘಟನೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ವರ್ತನೆ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ.
ವರದಿ :ಆರತಿ ಗಿಳಿಯಾರ್
8951345631