
ಶಿವಮೊಗ್ಗ ನಗರದಲ್ಲಿ ವಾಹನಗಳಿಂದ ಉಂಟಾಗುತ್ತಿರುವ ಕರ್ಕಶ ಹಾರನ್ ಶಬ್ದದ ಸಮಸ್ಯೆ ದಿನೇ ದಿನೇ ಗಂಭೀರ ಸ್ವರೂಪ ಪಡೆದಿದೆ. ಈ ಶಬ್ದ ಮಾಲಿನ್ಯದಿಂದಾಗಿ ವೃದ್ದರು, ಗರ್ಭಿಣಿಯರು, ಹೃದಯ ಸಂಬಂಧಿತ ರೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಪಕ್ಕದ ವಸತಿಗೃಹದ ಜನರು ತೀವ್ರ ಕಿರಿಕಿರಿಗೆ ಒಳಗಾಗುತ್ತಿದ್ದಾರೆ.
ಇತ್ತಿಚೆಗೆ ಸಂಚಾರಿ ಠಾಣೆಯ ಪಿ.ಎಸ್.ಐ ತಿರುಮಲ್ಲೇಶ್ ಅವರು ನಗರ ಬಸ್ಸುಗಳ ಹಾಗೂ ಶಾಲಾ ವಾಹನಗಳ ಹಾರನ್ ಶಬ್ದವನ್ನು ಪರಿಶೀಲಿಸಿ, ಶಬ್ದ ಮಾಲಿನ್ಯ ಎಷ್ಟು ತೀವ್ರವಾಗಿದೆ ಎಂಬುದನ್ನು ಚಾಲಕರಿಗೆ ತೋರಿಸಿದ್ದಾರೆ. ಇದರಿಂದಾಗಿ ಶಬ್ದ ಮಾಲಿನ್ಯ ತಡೆಯಲು ಅವರು ಕೈಗೊಂಡ ಕ್ರಮ ಜನತೆ ಮನ್ನಣೆ ಪಡೆದಿದೆ.

ಸಮಸ್ಯೆಯನ್ನು ಉಲ್ಲೇಖಿಸಿ ವಿಶ್ವಮಾನವ ವಿವೇಕಾನಂದ ವಿದ್ಯಾರ್ಥಿ ಯುವ ವೇದಿಕೆಯ ಅಧ್ಯಕ್ಷ ಯೋಗೀಶ್ ಪಾಟೀಲ್, ಗೌರವ ಅಧ್ಯಕ್ಷ ಸತೀಶ್ ಮುಂಚೆಮನೆ ಮತ್ತು ಸತೀಶ್ ಗೌಡ, ಜಗದೀಶ್ ಹಿರೇಮಠ, ಯುವರಾಜ್, ಚಂದ್ರಚಾರ್, ಮತ್ತು ಅವಿನಾಶ್ ಮೊದಲಾದವರು ಭಾಗವಹಿಸಿ ಇಂತಹ ಕರ್ಕಶ ಹಾರನ್ ಮಾಡುವ ವಾಹನ ಮಾಲೀಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮನವಿ ಸಲ್ಲಿಸಿದ್ದಾರೆ.
ಅವರು ವಿವರಿಸಿದಂತೆ, ಹಾರನ್ ಶಬ್ದವನ್ನು ನಿಯಂತ್ರಿಸಲು ಕೇವಲ ಚಾಲಕರಿಗೆ ದಂಡ ವಿಧಿಸುವುದಷ್ಟೇ ಸಾಕಾಗುವುದಿಲ್ಲ. ಬದಲಾಗಿ, ಈ ಪ್ರಮಾಣದ ಹಾರನ್ ಬಳಸಲು ಸಾಧ್ಯವಾಗದಂತೆ ಮಾಲೀಕರ ಮೇಲೂ ಕ್ರಮ ಕೈಗೊಳ್ಳಬೇಕು. ಜೊತೆಗೆ, ಈ ತರಹದ ಶಬ್ದ ಮಾಡುವ ವಾಹನಗಳನ್ನು ವಶಪಡಿಸಿಕೊಳ್ಳಬೇಕು.
ಸಾರ್ವಜನಿಕರ ಅನುಕೂಲಕ್ಕಾಗಿ ಈ ಸಮಸ್ಯೆಯನ್ನು ಆಲಿಸುವ ಅಧಿಕಾರಿಗಳಿಗೆ ಹಾಗೂ ಕ್ರಮ ಕೈಗೊಳ್ಳುವ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಪ್ರಶಂಸನೆಯನ್ನೂ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.