
ಕಲಬುರಗಿ :
ಜಿಲ್ಲೆಯ ರಟಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಗಂಗಮ್ಮ ಅವರು ಪರಿಶಿಷ್ಟ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿ ಮಾತನಾಡಿದ ಆರೋಪದ ಹಿನ್ನೆಲೆಯಲ್ಲಿ ಶನಿವಾರ ಅಮಾನತುಗೊಂಡಿದ್ದಾರೆ.
ಅಣಬಸಪ್ಪಗೌಡ ಪಾಟೀಲ್ ಮತ್ತು ದೊಡ್ಡಪ್ಪಗೌಡ ಕುಟುಂಬಗಳ ಮಧ್ಯೆ ನಡೆದ ಜಮೀನು ವಿವಾದವನ್ನು ಇತ್ಯರ್ಥಗೊಳಿಸುವ ಮಾತುಕತೆಯ ಸಮಯದಲ್ಲಿ ಪಿಎಸ್‌ಐ ಗಂಗಮ್ಮ ಪರಿಶಿಷ್ಟ ಸಮುದಾಯದ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎಂಬ ಆಕ್ಷೇಪಗಳಿವೆ. ಈ ಸಂಬಂಧ ಅವರ ಮಾತುಗಳನ್ನು ಹೊಂದಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಲಿತ ಪ್ಯಾಂಥರ್ ಮತ್ತು ದಲಿತ ಸೇನೆ ಸಂಘಟನೆಯ ಪದಾಧಿಕಾರಿಗಳು ಈ ಕುರಿತು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಉನ್ನತ ಪೊಲೀಸ್ ಅಧಿಕಾರಿಗಳು ಪಿಎಸ್‌ಐ ಗಂಗಮ್ಮ ಅವರನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ. ಈ ಘಟನೆ ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.