
ಶಿರಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬುಧವಾರ (08.01.2025) ಸಂಜೆ ನಾಲ್ಕು ಗಂಟೆಗೆ ಅರಣ್ಯ ಸಂಚಾರಿ ದಳ ನಡೆಸಿದ ದಾಳಿಯಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಆಕೇಶಿಯ ನಾಟಗಳನ್ನು ಲಾರಿ ಸಮೇತ ವಶಕ್ಕೆ ಪಡೆಯಲಾಗಿದೆ.
ಲಾರಿ ನಂಬರ್ KA 23-ಎ 4226ದಲ್ಲಿ ನಗರದಲ್ಲಿ ಶಂಕಿತವಾಗಿ ಸಾಗಿಸಲಾಗುತ್ತಿದ್ದ ಆಕೇಶಿಯ ನಾಟಗಳ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಅರಣ್ಯ ಸಂಚಾರಿ ದಳವು ಚಂದನ್ ವುಡ್ ವರ್ಕ್ಸ್ ಮತ್ತು ಫರ್ನಿಚರ್ ಹತ್ತಿರ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಶಿರಸಿ ಸಂಚಾರಿ ಅರಣ್ಯ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಎ ಎಚ್ ಅವರೊಂದಿಗೆ ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ್ ನಾಯ್ಕ ಹಾಗೂ ಸಂಚಾರಿ ದಳದ ಆರ್‌ಎಫ್‌ಒ ಶ್ರೀಮತಿ ಶಿಲ್ಪ ನಾಯ್ಕ್ ಭಾಗವಹಿಸಿದರು.
ಕಾರ್ಯಾಚರಣೆಯಲ್ಲಿ, ಆರೋಪಿಗಳಾದ ಮಾದೇವ ಆರ್.ವಿ (ಚಿಕ್ಕಳ್ಳಿ, ತಾ: ಕಾಗಲ್, ಜಿಲ್ಲೆ: ಕೊಲ್ಲಾಪುರ, ಮಹಾರಾಷ್ಟ್ರ) ಮತ್ತು ಜಗದೀಶ್ ಮಾದೇವ ಗುಡಿಗಾರ್ (ಕೊಪ್ಪಳ ಕಾಲನಿ, ಶಿರಸಿ) ಅವರನ್ನು ದಸ್ತಗಿರಿ ಮಾಡಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಮತ್ತು ಅಕ್ರಮ ವ್ಯಾಪಾರವನ್ನು ತಡೆಗಟ್ಟುವ ಉದ್ದೇಶವನ್ನು ಶ್ರೇಷ್ಠವಾಗಿ ಪೂರೈಸಿದ್ದು, ಶಿರಸಿ ಅರಣ್ಯ ಸಂಚಾರಿ ದಳದ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.