
ಶಿವಮೊಗ್ಗ :
ತಾಲೂಕಿನ ಅನುಪಿನಕಟ್ಟೆ ಲಂಬಾಣಿ ತಾಂಡದಲ್ಲಿ ಗಿರೀಶ್ (30) ಎಂಬ ಯುವಕನನ್ನು ತನ್ನ ಸ್ವಂತ ಅಣ್ಣ ಲೋಕೇಶ್ ಕೊಲೆ ಮಾಡಿದ ಘಟನೆ ನಡೆದಿದ್ದು, ವೈಯುಕ್ತಿಕ ಕಾರಣ ಮತ್ತು ಕುಡಿತದ ಮತ್ತದಿಂದ ಈ ದುರ್ಘಟನೆ ನಡೆದಿದೆ ಎಂಬುದು ಶಂಕೆ.
ಘಟನೆಯ ವಿವರಗಳ ಪ್ರಕಾರ, ಆರೋಪಿ ಲೋಕೇಶ್ ತನ್ನ ತಮ್ಮನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಮೊದಲು ಗಿರೀಶ್ ಮೇಲೆ ಈಳ್ಗೆ ಮಣೆಯಿಂದ ಹೊಡೆದು, ನಂತರ ಕಲ್ಲು ಬಳಸಿ ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆಯ ಸ್ಥಳದಲ್ಲಿಯೇ ಗಿರೀಶ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಪೊಲೀಸರಿಂದ ಶೀಘ್ರ ಕ್ರಮ: ತುಂಗಾನಗರ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಲೋಕೇಶ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆ ಪ್ರಕಾರ, ಕೊಲೆ ವೇಳೆ ಇಬ್ಬರೂ ಕುಡಿದ ಮತ್ತದಲ್ಲಿದ್ದು, ಕೂಲಿ ಕಾರ್ಮಿಕರಾಗಿ ಜೀವನ ನಿರ್ವಹಿಸುತ್ತಿದ್ದ ಸಹೋದರರ ನಡುವೆ ವೈಯುಕ್ತಿಕ ಕಾರಣಗಳಿಂದ ಈ ಜಘನ್ಯ ಕೃತ್ಯ ನಡೆದಿದೆ.
ಆರೋಪಿ ಲೋಕೇಶ್ ಮದುವೆಯಾಗಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದನು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.