March 14, 2025

ತಿಪಟೂರು: ಬಾಣಂತಿ ಸಾವಿನಿಂದ ಸಾರ್ವಜನಿಕ ಆಸ್ಪತ್ರೆಗಳ ಸ್ಥಿತಿ ಪ್ರಶ್ನೆಗೆ ಗುರಿ…!?

Spread the love



ತಿಪಟೂರು (ಡಿ.29): ರಾಜ್ಯದಲ್ಲಿ ಬಾಣಂತಿಯರ ಸಾವುಗಳ ಸರಣಿಗೆ ಮತ್ತೊಂದು ದುರಂತ ಸೇರ್ಪಡೆಯಾಗಿದ್ದು, ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ. ಗಾಂಧೀನಗರದ ಪಾಷಿಜಾನ್ ಅವರ ಪುತ್ರಿ ಫಿರ್‌ದೋಷ್ (26) ಎಂಬ ಮಹಿಳೆ ಡಿಸೆಂಬರ್ 27ರಂದು 2ನೇ ಹೆರಿಗೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

ಅಂದೇ ಮಧ್ಯಾಹ್ನ ಹೊಟ್ಟೆ ನೋವಿನ ಹಿನ್ನೆಲೆ ಸಿಜೇರಿಯನ್ ಆಪರೇಷನ್ ಮೂಲಕ ಹೆರಿಗೆ ಮಾಡಲಾಗಿದ್ದು, ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದರು. ಆದರೆ ಶನಿವಾರ ಬೆಳಗಿನ ಜಾವ 2 ಗಂಟೆಯ ನಂತರ ಬಾಣಂತಿಗೆ ಕೆಮ್ಮು ಪ್ರಾರಂಭವಾಗಿ ಶ್ವಾಸಕೋಶದ ತೊಂದರೆಯಿಂದ ಮೃತಪಟ್ಟಿದ್ದಾರೆ. ಫಿರ್‌ದೋಷ್ ಅವರಿಗೆ ಈಗಾಗಲೇ 5 ವರ್ಷದ ಪುತ್ರಿಯಿದ್ದು, 2ನೇ ಹೆರಿಗೆಗಾಗಿ ತಿಪಟೂರಿನ ಆಸ್ಪತ್ರೆಗೆ ಕರೆತರಲಾಗಿತ್ತು.

ಆಸ್ಪತ್ರೆಗಳ ಸ್ಥಿತಿಯ ಕುರಿತು ಆಕ್ರೋಶ
ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಾರ, ಇದು ತಿಪಟೂರಿನ ಮೊದಲ ಬಾಣಂತಿ ಸಾವಿನ ಘಟನೆ. ಆದರೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧ, ಆಪರೇಷನ್ ಉಪಕರಣಗಳು ಕಳಪೆಯಾಗಿದ್ದು, ಇದರಿಂದ ವೈದ್ಯಕೀಯ ಸೇವೆಯ ಗುಣಮಟ್ಟ ಕುಸಿದಿದೆ ಎಂಬ ಆರೋಪಗಳು ಮುಂದುವರಿಯುತ್ತಿವೆ. ಇತ್ತೀಚಿನ ಬಾಣಂತಿಯರ ಸಾವಿನ ಪ್ರಕರಣಗಳು ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಜನರ ನಂಬಿಕೆಯನ್ನು ಕಡಿಮೆ ಮಾಡುತ್ತಿವೆ.

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಮರ್ಪಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.