
ತುಮಕೂರು :
ಗುಬ್ಬಿ ತಾಲೂಕು ಹಾಗಲ ವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶಿವಕುಮಾರ್ ಎಸ್.ಎಚ್. ಅವರನ್ನು, ಸರ್ಕಾರಿ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅಮಾನತು ಮಾಡಿದ್ದಾರೆ. ನರೇಗಾ ಯೋಜನೆಯಡಿ ಜಲ್ಲಿ ರಸ್ತೆ ಕಾಮಗಾರಿ, ಅಮೃತ ಸರೋವರ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸದೆ, ನಿಯಮ ಬಾಹಿರವಾಗಿ ಕೂಲಿ ಮೊತ್ತವನ್ನು ಪಾವತಿಸಿ, ಅನುದಾನ ದುರುಪಯೋಗ ಮಾಡಿರುವುದಾಗಿ ತಿಳಿದುಬಂದಿದೆ.
ಗುಬ್ಬಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಲ್ಲಿಸಿದ ದಾಖಲೆಗಳಲ್ಲಿ ಆರೋಪಗಳು ದೃಢಪಟ್ಟಿದ್ದು, ಅಧಿಕಾರಿ ಶಿವಕುಮಾರ್ ಅವರ ವಿರುದ್ದದ ದೋಷಾರೋಪಣ ಪಟ್ಟಿ ಪರಿಶೀಲಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958ರ ನಿಯಮ 98ರನ್ವಯ, ಅವರಿಗೆ ಜೀವನಾಧಾರ ಭತ್ಯೆ ಪಾವತಿಸಲು ಸೂಚನೆ ನೀಡಲಾಗಿದೆ.
ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಜಾರಿಯಲ್ಲಿದ್ದು, ಅವರು ಹೆಚ್ಚಿನ ಪ್ರಾಧಿಕಾರದ ಲಿಖಿತ ಅನುಮತಿಯಿಲ್ಲದೆ ತಮ್ಮ ಕೇಂದ್ರ ಸ್ಥಾನವನ್ನು ಬಿಟ್ಟುಕೊಡಬಾರದು ಎಂದು ಸೂಚನೆ ನೀಡಲಾಗಿದೆ.