ಮೈಸೂರು :DC Office: ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ಅಸಹಕಾರದಿಂದ ನೊಂದ ತಂದೆಯೊಬ್ಬರು ತಮ್ಮ ತಾರುಣ್ಯದ ಮಗನ ಶವವನ್ನು ಮೊಪೆಡ್‌ನಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತಂದ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ತರಗನಹಳ್ಳಿ ಗ್ರಾಮದ ನಿವಾಸಿ, ತಮ್ಮೂರಿನ ಜನರು ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವುದಾಗಿ ಆರೋಪಿಸಿದ್ದಾರೆ.
ನಂಜನಗೂಡು: ಅನಾರೋಗ್ಯದಿಂದ ಸಾವಿಗೀಡಾದ ತಮ್ಮ ಮಗನ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಸಹಕರಿಸಲಿಲ್ಲಎಂದು ಆರೋಪಿಸಿ, ತಂದೆಯೊಬ್ಬ ಮೃತದೇಹವನ್ನು ಜಿಲ್ಲಾಧಿಕಾರಿ ಕಚೇರಿಗೆ ಮೊಪೆಡ್‌ನಲ್ಲಿ ಕೊಂಡೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ತಾಲೂಕಿನ ಹುಲ್ಲಹಳ್ಳಿ ಸಮೀಪದ ತರಗನಹಳ್ಳಿ ಗ್ರಾಮದ ನಿವಾಸಿ, ತರಕಾರಿ ವ್ಯಾಪಾರಿ ಕುಳ್ಳನಾಯಕ ಎಂಬುವರ ಪುತ್ರ ಮಾದೇಶ (15) ಶುಕ್ರವಾರ ಮಧ್ಯರಾತ್ರಿ ಅನಾರೋಗ್ಯದಿಂದ ಮನೆಯಲ್ಲಿಯೇ ಸಾವಿಗೀಡಾಗಿದ್ದಾನೆ.ನಮಗೆ ಗ್ರಾಮಸ್ಥರು ಈ ಹಿಂದೆಯೇ ಬಹಿಷ್ಕಾರ ಹಾಕಿದ್ದು, ಮಗನ ಅಂತ್ಯ ಸಂಸ್ಕಾರಕ್ಕೆ ನೆರವು ನೀಡಲಿಲ್ಲ. ಹೀಗಾಗಿ ಮಗನ ಮೃತದೇಹವನ್ನು ಮೊಪೆಡ್‌ನಲ್ಲಿ ಇಲ್ಲಿಗೆ ತಂದಿರುವೆ” ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಡಿಸಿ ಅವರಿಗೆ ಕುಳ್ಳನಾಯಕ ತಿಳಿಸಿದರು.ಕೂಡಲೇ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ, ಗ್ರಾಮಕ್ಕೆ ಹೋಗಿ ಮಾದೇಶನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಗ್ರಾಮಕ್ಕೆ ಧಾವಿಸಿದ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಪ್ರಕಾಶ್ ನೇತೃತ್ವದ ಸಿಬ್ಬಂದಿ ಅಂತ್ಯ ಸಂಸ್ಕಾರಕ್ಕೆ ಅಗತ್ಯ ಸಿದ್ಧತೆಯನ್ನು ಮಾಡುವ ಜತೆಗೆ ಗ್ರಾಮಸ್ಥರ ಮನವೊಲಿಸಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವಂತೆ ನೋಡಿಕೊಂಡರು.
ನಮ್ಮ ಕುಟುಂಬದವರನ್ನು ಊರಿನ ನಮ್ಮದೇ ಸಮುದಾಯದವರು ಬಹಿಷ್ಕಾರಕ್ಕೆ ಒಳಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಶುಕ್ರವಾರ ರಾತ್ರಿ ನನ್ನ ಮಗ ಅನಾರೋಗ್ಯದಿಂದ ನಿಧನನಾದ. ಅಂತ್ಯಸಂಸ್ಕಾರಕ್ಕೆ ನೆರವು ನೀಡುವಂತೆ ಗ್ರಾಮಸ್ಥರನ್ನು ಶನಿವಾರ ಬೆಳಗ್ಗೆ ಕೇಳಿಕೊಂಡೆವು. ಬಹಿಷ್ಕಾರ ವಿಧಿಸಿರುವುದರಿಂದ ನೆರವು ನೀಡಲು ಸಾಧ್ಯವಿಲ್ಲ ಎಂದು ಸ್ಥಳೀಯರು ತಿಳಿಸಿದರು. ಅನಿವಾರ್ಯವಾಗಿ ಮೈಸೂರಿಗೆ ಮಗನ ಮೃತದೇಹವನ್ನು ಮೊಪೆಡ್‌ನಲ್ಲಿ ಕೊಂಡೊಯ್ದಿದ್ದೆ. ಎಡಿಸಿಯವರು ನೆರವು ನೀಡಿ ಅಲ್ಲಿಂದಲೇ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ವಾಪಸ್ ಊರಿಗೆ ಮರಳಿದೆ” ಎಂದು ಕುಳ್ಳನಾಯಕ ಮಾಹಿತಿ ನೀಡಿದರು.ಕುಳ್ಳನಾಯಕನ ಕುಟುಂಬಕ್ಕೆ ಯಾವುದೇ ಬಹಿಷ್ಕಾರವನ್ನು ಹಾಕಿಲ್ಲ. ಕುಳ್ಳನಾಯಕ ಮಾರುವ ತರಕಾರಿಯನ್ನೂ ಕೊಳ್ಳುತ್ತಿದ್ದೇವೆ. ಆದರೂ ನಮ್ಮ ಬಗ್ಗೆ ಸುಳ್ಳು ದೂರು ನೀಡಲಾಗಿದೆ” ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
“ಕುಳ್ಳನಾಯಕ ಎಂಬುವವರು ತಮ್ಮ ಮಗನ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಮೃತದೇಹದೊಂದಿಗೆ ನಮ್ಮ ಕಚೇರಿಗೆ ಬಂದಿದ್ದರು. ಕಂದಾಯ ಇಲಾಖೆ ಅಧಿಕಾರಗಳು, ಸಿಬ್ಬಂದಿ ಮೂಲಕ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆವು” ಎಂದು ಮೈಸೂರಿನ ಅಪರ ಜಿಲ್ಲಾಧಿಕಾರಿ ಸಿ.ಶಿವರಾಜು ತಿಳಿಸಿದ್ದಾರೆ.