
ತುಮಕೂರು:
ಮಾರಕ ಡೆಂಗ್ಯೂಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, 19 ವರ್ಷದ ಗುಣಶ್ರೀ ಡೆಂಗ್ಯೂವಿನಿಂದಾಗಿ ಮೃತಪಟ್ಟಿದ್ದಾಳೆ. ತುಮಕೂರು ನಗರದ ಶಾಂತಿನಗರ ಕುಂಟಯ್ಯನ ತೋಟ ಬಡಾವಣೆಯ ನಿವಾಸಿ ರಾಜು ಎಂಬುವರ ಪುತ್ರಿ ಗುಣಶ್ರೀಗೆ ಜುಲೈ 12ರಂದು ಜ್ವರ ಕಾಣಿಸಿಕೊಂಡಿತ್ತು. ಪೋಷಕರು ಈಕೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಗುಣವಾಗದ ಹಿನ್ನೆಲೆಯಲ್ಲಿ ಜುಲೈ 17ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ, ಜುಲೈ 18ರಂದು ಹೆಚ್ಚಿನ ಚಿಕಿತ್ಸೆಗಾಗಿ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಸಂಜೆ ಗುಣಶ್ರೀ ಕೊನೆಯುಸಿರೆಳೆದಿದ್ದಾಳೆ. ಆರೋಗ್ಯ ಇಲಾಖೆಯು ಡೆಂಗ್ಯೂವಿನಿಂದ ಮೃತಪಟ್ಟಿರುವ ಬಗ್ಗೆ ತಡವಾಗಿ ದೃಢಪಡಿಸಿದೆ.
ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಮರಣ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಘಟನೆ ಆರೋಗ್ಯ ಇಲಾಖೆಗೆ ಎಚ್ಚರಿಕೆಯ ಘಂಟೆಯಾಗಿದೆ. ಸಾರ್ವಜನಿಕರು ಡೆಂಗ್ಯೂ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಅದರಿಂದ ಮತ್ತಷ್ಟು ಅರಿತುಕೊಳ್ಳಬೇಕು.