
ಮೈಸೂರು :
ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ, ಇಂದು ಭಕ್ತರು ಚಾಮುಂಡಿ ಬೆಟ್ಟಕ್ಕೆ ಹರಿದು ಬರುತ್ತಿದ್ದಾರೆ. ದೇವಿಯ ದರ್ಶನ ಸುಗಮವಾಗಿ ನಡೆಯಲು, ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಮುಂಜಾನೆ 3:30ರಿಂದ ಮಹಾ ನ್ಯಾಸಪೂರ್ವಕ ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ದೇವಾಲಯದ ಆವರಣದಲ್ಲಿ ಭಕ್ತರು ಸುರಕ್ಷಿತ ಮತ್ತು ಸೌಕರ್ಯಪೂರ್ಣವಾಗಿ ದರ್ಶನ ಪಡೆಯಲು, ಜಾಗಾವನ್ನು ಸ್ವಚ್ಛವಾಗಿಟ್ಟುಕೊಳ್ಳಲು, ನೀರಿನ ವ್ಯವಸ್ಥೆ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾಡಳಿತವು ನಿಗದಿಪಡಿಸಿರುವ ಸಮಯದಲ್ಲಿ ನಿಗದಿತ ಸ್ಥಳಗಳಲ್ಲಿ ಪ್ರಸಾದ ವಿತರಣೆಯನ್ನು ಸುಗಮವಾಗಿ ನಡೆಸಲು ವ್ಯವಸ್ಥೆ ಮಾಡಲಾಗಿದೆ . ಭಕ್ತರ ಹಿತದೃಷ್ಟಿಯಿಂದ ದೇವಾಲಯದ ಸಿಬ್ಬಂದಿ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಚಾಮುಂಡಿ ಬೆಟ್ಟದ ಆಷಾಢ ಶುಕ್ರವಾರದ ವಿಶೇಷ ಪೂಜೆಗೆ, ನೂರಾರು ಭಕ್ತರು ಭಾಗವಹಿಸುತ್ತಿದ್ದು, ಶ್ರದ್ಧೆ ಮತ್ತು ಭಕ್ತಿಯಿಂದ ದೇವಿಯ ದರ್ಶನವನ್ನು ಪಡೆಯುತ್ತಿದ್ದಾರೆ…..