March 15, 2025

ಸ್ಮಶಾನ ಭೂಮಿ ಒತ್ತುವರಿ ತೆರವು

Spread the love



ರಿಪ್ಪನ್‌ಪೇಟೆ:

ಬಾಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಕ್ಕಳಲೆ ಗ್ರಾಮದ ಸರ್ವೇ ನಂ.13ರಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ ಹಿನ್ನೆಲೆಯಲ್ಲಿ ಹೊಸನಗರ ತಹಸೀಲ್ದಾರ್ ರಶ್ಮಿ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಒತ್ತುವರಿ ತೆರವುಗೊಳಿಸಿದರು.

ಎರಡು ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಮಾಡಿದ ಹಿನ್ನೆಲೆ ಖಾತೆ, ಪಹಣಿ ಮಾಡಿಕೊಡಲಾಗಿತ್ತು. ಆದರೂ, ಗ್ರಾಮದ ವ್ಯಕ್ತಿಯೊಬ್ಬರು ನಿಗದಿಪಡಿಸಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಲು ಪ್ರಯತ್ನಿಸಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕಂದಾಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಎರಡು ಎಕರೆ ಜಾಗವನ್ನು ತೆರವುಗೊಳಿಸಿ ಜಾಗದ ಸುತ್ತಲೂ ಜಿಸಿಬಿ ಮೂಲಕ ಟ್ರಂಚ್ ನಿರ್ಮಾಣ ಮಾಡಿದ್ದಾರೆ.

ಪಿಡಿಓ ಭರತ್, ಪಿಎಸ್‌ಐ ಪ್ರವೀಣ್, ಕಂದಾಯ ನಿರೀಕ್ಷಕ ಸೈಯದ್ ಅಫೋಜ್, ಶಿರಸ್ತೆದಾರ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ಅಂಬಿಕಾ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.