
ಬೆಳಗಾವಿ:
ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ-ಮಗುವಿಗೆ ಉಪಚಾರ ಮಾಡಿ ಆರೈಕೆ ಮಾಡುವ ಮೂಲಕ ಶಮಾ-ರಿಜ್ವಾನ್ ದಂಪತಿ ಮಾನವೀಯತೆ ಮೆರೆದಿದ್ದಾರೆ. ದಂಡಾಪುರ ಗ್ರಾಮದ ಶಾಂತವ್ವ ಕುಮಾರ ನಿಡಸೋಸಿ ಹೆರಿಗೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಅವಳಿಗೆ ಅನಾರೋಗ್ಯ ಕಾಡಿತು.
ಈ ವೇಳೆ ಪಕ್ಕದ ಬೆಡ್ ಮೇಲೆ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಶಮಾ ರಿಜ್ವಾನ್ ದೇಸಾಯಿ ಎಂಬ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಶಾಂತವ್ವಳ ಪರಿಸ್ಥಿತಿ ಕಂಡು ಆರೈಕೆ ಮಾಡಿದ ಶಮಾ ಹಾಗೂ ರಿಜ್ವಾನ್ ದಂಪತಿ ಶಾಂತವ್ವಳ ಹೃದಯ ವೈಶಾಲ್ಯತೆ ಮೆರೆದು ಮಾನವೀಯತೆ ತೋರಿದ್ದಾರೆ.
ಶಾಂತವ್ವ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಶಮಾ ಹಾಗೂ ರಿಜ್ವಾನ್ ದಂಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಯಾವುದೇ ಧರ್ಮ-ಜಾತಿ ಅಡ್ಡ ಬರಲಿಲ್ಲ. ಶಾಂತವ್ವ ಹಾಗೂ ಮಗುವನ್ನು ಸರಿಯಾಗಿ ಉಪಚರಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೆ.
ಇವರಿಬ್ಬರೂ ಸಂಪೂರ್ಣವಾಗಿ ಸುಧಾರಿಸುವವರೆಗೂ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಆರೈಕೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಮಾ ಹಾಗೂ ರಿಜ್ವಾನ್ ದಂಪತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಸನ್ಮಾನಿಸಿ ಇವರ ಮಾನವೀಯ ಗುಣ ಕೊಂಡಾಡಿದ್ದಾರೆ.✍️✍️✍️