
ಅಂಕ ಕಡಿಮೆಯಾಯಿತು ಎಂದು ಕೊರಗುವವರನ್ನು ಕಂಡಿದ್ದೇವೆ. ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 624 ಬಂದರೂ ಛೇ! ಒಂದು ಅಂಕ ಹೋಯಿತಲ್ಲಾ ಎಂದು ತಲೆಬಿಸಿ ಮಾಡಿಕೊಳ್ಳುವ ಹಲವು ವಿದ್ಯಾರ್ಥಿಗಳು ಕಾಣಸಿಗುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಡಿಫರೆಂಟ್. 625ಕ್ಕೆ 300 ಅಂಕ ಪಡೆದು ಜಸ್ಟ್ ಪಾಸಾದರೂ ಫುಲ್ ಖುಷಿಯಲ್ಲಿದ್ದಾರೆ. ಆತನಿಗೆ ತಾನು ಪಾಸಾಗಿದ್ದೇನೆ ಎಂಬುದೇ ಸಂಭ್ರಮದ ವಿಷಯ. ಅಂಕ, ಸ್ಥಾನ ಯಾವುದೂ ಆತನ ಖುಷಿಗೆ ಅಡ್ಡಿಯಾಗಿಲ್ಲ. ಈತನ ಖುಷಿಯನ್ನು ಆತನ ಗೆಳೆಯರು ಕೂಡ ಬ್ಯಾನರ್ ಅಳವಡಿಸುವ ಮೂಲಕ ಸಂಭ್ರಮಿಸಿದ್ದಾರೆ.
ಹೌದು, ಮಂಗಳೂರು ನಗರದ ಪಚ್ಚನಾಡಿಯಲ್ಲಿ ಇಂತಹದ್ದೊಂದು ಸಂಭ್ರಮ ಕಂಡುಬಂದಿದೆ. ಆತನ ಹೆಸರು ಹ್ಯಾಸ್ಲಿನ್. ಈತ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದು ತೇರ್ಗಡೆಯಾಗಿದ್ದಾನೆ. ಈತನ ಸಂಭ್ರಮಕ್ಕೆ ಸಾಥ್ ನೀಡಿರುವ ಆತನ ಸ್ನೇಹಿತರು ಪಚ್ಚನಾಡಿಯಲ್ಲಿ ಅಭಿನಂದನಾ ಬ್ಯಾನರನ್ನೇ ಹಾಕಿಬಿಟ್ಟಿದ್ದಾರೆ. ಈ ಬ್ಯಾನರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹ್ಯಾಸ್ಲಿನ್ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗುವ ಭರವಸೆ ಆತನ ಸ್ನೇಹಿತರಿಗಿರಲಿಲ್ಲ. ಆದರೆ ರಿಸಲ್ಟ್ ಬರುವಾಗ ಹ್ಯಾಸ್ಲಿನ್ ಪಾಸಾಗಿಬಿಟ್ಟಿದ್ದ. ಈ ಖುಷಿಯಲ್ಲಿ ಅವನ ಸ್ನೇಹಿತರು ಪಚ್ಚನಾಡಿಯ ಮಂಗಳಾನಗರದ ರಸ್ತೆ ಬದಿಯಲ್ಲಿ ಬ್ಯಾನರ್ ಹಾಕಿದ್ದಾರೆ.
ಬ್ಯಾನರ್‌ನಲ್ಲಿ ಏನಿದೆ?
ಬ್ಯಾನರ್ ಅಳವಡಿಸಿದ ಸ್ನೇಹಿತರು ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಷನ್ ಮಹಾತ್ಮಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್- ಕ್ರಾಕ್ಸ್- ಪಿಯುಸಿ ಆಮಿಷದಿಂದ ಎಲ್ಲರ ಕುತೂಹಲ, ಬ್ರೂಸ್ಲಿ (ಹ್ಯಾಸ್ಲಿನ್) ಪಾಸೋ ಫೇಲೋ, ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು ಗೀಚಿ ಫೇಲ್ ಆಗುವವನು ಹರಕೆಯ ಬಲದಿಂದ, ಪ್ರಯತ್ನದ ಫಲದಿಂದ ಹೇಗೋ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್ ಪಾಸಾಗಿರೋದೆ ನಮಗೆಲ್ಲ ಸಂಭ್ರಮ ಸಂಭ್ರಮ.. ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಟಿನ್ ನಿಮಗೆ ಅಭಿನಂದನೆಗಳು’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.
ಬ್ಯಾನರ್ ಬರೆದವರು- ಹ್ಯಾಸ್ಲಿನ್ (ಬ್ರೂಸ್ಸಿ) ಹಿತೈಷಿಗಳು, ಯುವ ಫ್ರೆಂಡ್ಸ್ ಮಂಗಳಾನಗರ ಎಂದು ಬರೆದಿದೆ…… ✍️