March 14, 2025

Bengaluru: ಅಪಘಾತದ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ,!

Spread the love

ಬೆಂಗಳೂರು: ಬೈಕ್‌ಗೆ ಕಾರು ಟಚ್‌ ಮಾಡಿದನ್ನು ಪ್ರಶ್ನಿಸಿದ ಸವಾರನಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದು, ಆತ ಮೃತಪಟ್ಟಿರುವ ಘಟನೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ತೂರು ಕಾಲೋನಿ ನಿವಾಸಿ ಪ್ರಭುರಾಮ್‌ ಪ್ರಸಾದ್‌ (33) ಮೃತ ವ್ಯಕ್ತಿ. ಕೃತ್ಯ ಎಸಗಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಅನಿಲ್‌ನನ್ನು ಬಂಧಿಸಲಾಗಿದೆ.
ಕಾರು ಚಾಲಕನಾಗಿರುವ ಬೆಳ್ತೂರು ನಿವಾಸಿ ಪ್ರಭುರಾಮ್‌ ಪ್ರಸಾದ್‌, ಸಹೋದರಿ ಪುತ್ರ ಅಭಿಲಾಷ್‌ ಜತೆ ದ್ವಿಚಕ್ರ ವಾಹನದಲ್ಲಿ ಭಾನುವಾರ ಬೆಳ್ತೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೋಗಿದ್ದರು. ರಾತ್ರಿ 7 ಗಂಟೆಗೆ ವಾಪಸ್‌ ಬರುತ್ತಿದ್ದರು. ಮಾರ್ಗ ಮಧ್ಯೆ ದುರ್ಗಮ್ಮ ದೇವಾಲಯದ ಬಳಿ ದ್ವಿಚಕ್ರ ವಾಹನದಲ್ಲಿ ಏನೋ ಶಬ್ಧ ಬಂದಿದೆ. ಅದರಿಂದ ಅನುಮಾನಗೊಂಡ ಪ್ರಭುರಾಮ್‌ ಪ್ರಸಾದ್‌, ಬೈಕ್‌ಅನ್ನು ಪಕ್ಕಕ್ಕೆ ನಿಲುಗಡೆ ಮಾಡಿ ಪರಿಶೀಲಿಸುತ್ತಿದ್ದರು. ಈ ವೇಳೆ ಆರೋಪಿ ಅನಿಲ್‌ ಪತ್ನಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಹಾರ್ನ್ ಮಾಡಿದ್ದಾರೆ. ಆದರೆ, ಪ್ರಭುರಾಮ್‌ ಪ್ರಸಾದ್‌ಗೆ ಕೇಳಿಸಿಲ್ಲ. ಹೀಗಾಗಿ ಬೈಕ್‌ಗೆ ಸಣ್ಣ ಪ್ರಮಾಣದಲ್ಲಿ ತಗುಲಿಸಿಕೊಂಡು ಹೋಗಿದ್ದಾರೆ. ಅದರಿಂದ ಕೋಪಗೊಂಡ ಪ್ರಭುರಾಮ್‌ ಪ್ರಸಾದ್‌, ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಮಹಿಳೆಯನ್ನು ಪ್ರಶ್ನಿಸಿದ್ದಾನೆ. ಅದಕ್ಕೆ ಆಕೆ, ರಸ್ತೆಯಲ್ಲಿ ಮಾತನಾಡುವುದು ಬೇಡ. ಪಕ್ಕದಲ್ಲೇ ಮನೆ ಇದೆ ಬನ್ನಿ ಎಂದು ಹೇಳಿ ಹೋಗಿದ್ದಾರೆ. ಹಿಂದೆಯೇ ಮನೆಗೆ ಹೋದಾಗ, ಅಷ್ಟರಲ್ಲಿ ನಡೆದ ಘಟನೆಯನ್ನು ಮಹಿಳೆ ತನ್ನ ಪತಿ ಅನಿಲ್‌ಗೆ ವಿವರಿಸಿದ್ದರು. ಈ ವೇಳೆ ಅನಿಲ್‌ ಮತ್ತು ಪ್ರಭುರಾಮ್‌ ಪ್ರಸಾದ್‌ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಕೋಪಗೊಂಡ ಅನಿಲ್‌, ಪ್ರಭುರಾಮ್‌ ಪ್ರಸಾದ್‌ ಕಪಾಳಕ್ಕೆ ನಾಲ್ಕೈದು ಬಾರಿ ಹೊಡೆದಿದ್ದು, ಸ್ಥಳೀಯರು ಜಗಳ ಬಿಡಿಸಿದ್ದಾರೆ.
ಆ ನಂತರ ಮನೆಗೆ ಹೋಗಿ, ನೋವಿನಿಂದಲೇ ಮಲಗಿದ್ದ ಪ್ರಭುರಾಮ್‌ ಪ್ರಸಾದ್‌, ತಡರಾತ್ರಿ 1 ಗಂಟೆಗೆ ಮೃತಪಟ್ಟಿದ್ದಾನೆ. ಇತ್ತ ತಾಯಿ, ನೋವು ಹೇಗಿದೆ ಎಂದು ಪುತ್ರನನ್ನು ಕೇಳಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.